ಭಾಗೀರಥಿ
ಗಂಗಾನದಿಯ ಉಗಮ ನಾಮ. ಕಮಠ ಹಿಮಪರ್ವತದ ಬುಡದಲ್ಲಿ ಸುಮಾರು 2364 ಮೀಟರ್ ಎತ್ತರದಲ್ಲಿ ಗೋಮುಖ ಎಂಬಲ್ಲಿ ಹುಟ್ಟಿ ಅಲ್ಲಿಂದ ಸುಮಾರು 25 ಕಿಮೀ ದೂರದಲ್ಲಿರುವ ಉತ್ತರ ಪ್ರದೇಶದ ತೆಹ್ರಿಘರ್‍ವಾಲ್ ಜಿಲ್ಲೆಯ ಗಂಗೋತ್ರಿ ಧಾಮದಲ್ಲಿ ಈ ನದಿ ಗೋಚರವಾಗುತ್ತಂದೆಂಬುದು ಭೌಗೋಲಜ್ಞರ ಅಭಿಪ್ರಾಯ. ಈ ಗಂಗೋತ್ರಿಯಲ್ಲಿ ಗಂಗೆ, ಯಮುನೆ, ಸರಸ್ವತಿ, ಲಕ್ಷ್ಮಿ, ಪಾರ್ವತಿ ಮತ್ತು ಅನ್ನಪೂರ್ಣೆಯರ ಸ್ವರ್ಣಪ್ರತಿಮೆಗಳಿರುವ ಮಂದಿರವೂ ಭಗೀರಥ ಗಂಗೆಯ ಸಮ್ಮುಖದಲ್ಲಿ ಕೈಜೋಡಿಸಿ ನಿಂತಿರುವ ಪ್ರತಿಮೆಯೂ ಇವೆ. ಈ ಧಾಮದ ಸುತ್ತಲೂ ದೇವದಾರುವಿನ ಅರಣ್ಯವಿದೆ. ಅಲ್ಲಿಂದ ಕೆಳಗೆ ಹರಿದ ಭಾಗೀರಥಿಗೆ ಕೇದಾರಗಂಗಾ ನದಿ ಬಂದು ಸೇರುತ್ತದೆ. ಮುಂದೆ ಅರ್ಧ ಕಿಮೀ ಕೆಳಗೆ ಬಂದರೆ ಭಾಗೀರಥಿ ನದಿ ಅಲ್ಲಿರುವ ಒಂದು ಶಿವಲಿಂಗದ ಮೇಲೆ ದುಮುಕುತ್ತದೆ. ಇಲ್ಲಿಗೆ ಅನತಿ ದೂರದಲ್ಲಿ ಹರಶಿಲ ಎಂಬ ಸ್ಥಳವಿದ್ದು ಇಲ್ಲಿಂದ ಕೈಲಾಸ ಹಾಗೂ ಮಾನಸ ಸರೋವರಗಳಿಗೆ ಹೋಗುವ ದಾರಿಯಿದೆ. ಇದರ ಸಮೀಪದಲ್ಲಿಯೇ ಶ್ಯಾಮಪ್ರಯಾಗ ಎಂಬಲ್ಲಿ ಭಾಗೀರಥಿಗೆ ಶ್ಯಾಮಗಂಗಾ ನದಿ ಬಂದು ಸೇರುತ್ತದೆ. ಭಾಗೀರಥಿ ನದಿಯ ದಡದಲ್ಲಿ ಅನೇಕ ಪ್ರಾಚೀನ ಮಂದಿರಗಳಿರುವ ಉತ್ತರಕಾಶಿ ಎಂಬ ನಗರವಿದೆ. ಇಲ್ಲಿಯ ವಿಶ್ವನಾಥ, ಏಕಾದಶರುದ್ರ ಮತ್ತು ಶಕ್ತಿ ಮಂದಿರಗಳು ಪ್ರಮುಖವಾದವು. ಉತ್ತರ ಕಾಶಿಯಿಂದ ಕೆಳಗೆ ಬಂದರೆ ಧಾರಾಸು ಎಂಬ ಸ್ಥಳವಿದೆ. ಇಲ್ಲಿಂದ ಯಮುನೋತ್ರೀ ಧಾಮಕ್ಕೆ ಮಾರ್ಗವಿದೆ. ಧಾರಾಸಿಯಿಂದ ಮುಂದೆ 45 ಕಿಮೀ ದೂರದಲ್ಲಿರುವ ಭಿಲಂಗನಾ ನದಿ ಸೇರುತ್ತದೆ. ಸಂಗಮದ ಬಳಿಯೇ ಉತ್ತರ ಕಾಶಿ ಜಿಲ್ಲೆಯ ಪ್ರಸಿದ್ಧವಾದ ಟಹರಿ ನಗರವಿದೆ. ಇದು ಮೊದಲು ಮಹಾರಾಜ ಸುದರ್ಶನ ಶಾಹನ ರಾಜಧಾನಿಯಾಗಿತ್ತು. ಇಲ್ಲಿ ಬದರೀನಾಥ ಹಾಗೂ ಕೇದಾರನಾಥ ಮಂದಿರಗಳಿವೆ. ಇಲ್ಲಿಂದ ಮೂಲ ಕೇದಾರಕ್ಕೆ ಹೋಗಲು ರಸ್ತೆ ಇದೆ. ಟಹರಿಯಿಂದ ಕೆಳಗೆ ಹರಿದ ಭಾಗೀರಥಿಗೆ ದೇವಪ್ರಯಾಗದ ಬಳಿ ಅಲಕನಂದಾ ನದಿ ಸೇರುತ್ತದೆ. ಇಲ್ಲಿ ರಘುನಾಥ ಮಂದಿರ ಮತ್ತು ಕೆಲವು ಬ್ರಾಹ್ಮೀಲಿಪಿಯ ಪುರಾತನ ಶಾಸನಗಳಿವೆ. ಈ ಸಂಗಮಸ್ಥಳ ಅತ್ಯಂತ ರಮಣೀಯ ಹಾಗೂ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. ಇಲ್ಲಿದ್ದ ಮುಂದೆ ಹರಿದ ಭಾಗೀರಥಿಯ ದೊಡ್ಡ ಪ್ರವಾಹವೇ ಲೋಕ ಪ್ರಸಿದ್ಧ ಗಂಗಾನದಿ. 				 (ನೋಡಿ- ಗಂಗಾ-ನದಿ)

ಋಷಿಯ ಶಾಪದಿಂದ ಬೂದಿಯಾಗಿದ್ದ ಸಗರನ ಅರುವತ್ತು ಸಾವಿರ ಮಕ್ಕಳಿಗೆ ಸದ್ಗತಿ ದೊರೆಯುವಂತಾಗಲು ಭಗೀರಥ ಭಾಗೀರಥಿಯನ್ನು ಭೂಮಿಗೆ ಕರೆತಂದನೆಂಬ ಕಥೆ ಪುರಾಣದಲ್ಲಿದೆ. ಪ್ರಾಚೀನ ಕಾಲದ ಗೌಡ, ಪಾಂಡವ, ರಾಜಮಹಲ್ ಹಾಗೂ ನವದ್ವೀಪ ಮೊದಲಾದ ರಾಜರ ರಾಜಧಾನಿಗಳೂ ಈ ನದಿಯ ದಡದಲ್ಲಿಯೇ ಇದ್ದುವೆಂದು ಹೇಳಲಾಗುತ್ತದೆ.
(ಕೆಆರ್‍ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ